guptachar vani

About Guptachar Vani

ಗುಪ್ತಚಾರ ವಾಣಿ ಕನ್ನಡ ವಾರ ಪತ್ರಿಕೆಯ ಬಗ್ಗೆ:-

ಇಂಥದ್ದೊಂದು ಪತ್ರಿಕೆ ನಮ್ಮ ಸಮಾಜಕ್ಕೆ ಬೇಕಾಗಿತ್ತು. ಇದನ್ನು ಸಾಕಾರಗೊಳಿಸಿದವರು ಸಹಕಾರ ಸಂಘಗಳ ಉಪ ನಿಬಂಧಕರಾಗಿದ್ದ ಪಿ. ಡಿ. ಸುಗತೆ ಅವರು. 1987ರಲ್ಲಿ ಶ್ರೀಮತಿ ಅಹಲ್ಯಾಬಾಯಿ ಸುಗತೆ ಅವರ ಸಂಪಾದಕತ್ವದಲ್ಲಿ ಗುಪ್ತಚಾರ ಪತ್ರಿಕೆ ಆರಂಭಿಸಲಾಯಿತು. ಸಮಾಜದ ಓರೆ-ಕೋರೆಗಳನ್ನು ತಿದ್ದುವ ಮೂಲಕ ಸಮಾಜದಲ್ಲಿನ ಪ್ರತಿಭೆಗಳು, ಕಲಾವಿದರು, ಶಿಕ್ಷಣ ತಜ್ಞರು, ರಾಜಕೀಯ ನಿಪುಣರ ಪರಿಚಯಾತ್ಮಕ ಲೇಖನಗಳ ಜೊತೆಗೆ ವಧು-ವರರ ವಿವಾಹ ವೇದಿಕೆಯಂತಹ ಮಾಹಿತಿಗಳನ್ನು ಕೂಡ ನಿಡಲಾಗುತ್ತಿತ್ತು. ಬರಹಗಾರರಿಗೆ ಕೂಡ ಉತ್ತೇಜನ ನೀಡಲು ಕಥೆ, ಕವನ, ಲೇಖನಗಳು ಗುಪ್ತಚಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪಿ.ಡಿ. ಸುಗತೆ ಅವರು ಮನಸ್ಸುಗಳನ್ನು ಬೆಸೆಯುವ ಕಾಯಕ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

ಸಾಕಷ್ಟು ಏಳು-ಬೀಳುಗಳ ನಡುವೆ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಪತ್ರಿಕೆಯನ್ನು ಸತತ ಮೂವತ್ತು ವರ್ಷಗಳಿಂದ ಪ್ರಕಟಿಸಲಾಗುತ್ತಿದೆ. ಈಗಾಗಲೇ ಹಳೆಯ 27 ಸಂಚಿಕೆಗಳು ಮತ್ತು ಹೊಸದಾಗಿ ಎರಡು ಸಂಚಿಕೆಗಳು ಪ್ರಕಟಗೊಂಡಿದ್ದು, ಸಮಾಜದ ಜನರು ಪತ್ರಿಕೆಯನ್ನು ಕೊಂಡು, ಓದಿ, ಜಾಹೀರಾತು ನೀಡುವ ಮೂಲಕ ಉತ್ತೆಜಿಸಬೇಕಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿರುವ ಸಮಾಜದ ಜನರಿಗೆ ವಾರಕ್ಕೊಂದು ಬಾರಿ ಸುಮಾರು 2 ಸಾವಿರ ಪ್ರತಿಗಳನ್ನು ಮುದ್ರಿಸಿ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ 12 ವರ್ಷದ ಹಿಂದೆಯೇ ನಿವೃತ್ತರಾಗಿ ಪತ್ರಿಕೆಯನ್ನು ಉಳಿಸಿ-ಬೆಳೆಸಲು ಶ್ರಮಿಸುತ್ತಿರುವ ಸುಗತೆ ದಂಪತಿಗಳು ಮೂಲತಃ ಬೆಳಗಾವಿ ಜಿಲ್ಲೆ ನೇಸರ್ಗಿ ವಾಡಿಯವರು. ಹುಬ್ಬಳ್ಳಿಯ ನವನಗರದಲ್ಲಿ ವಾಡಿ ನಿರ್ಮಾಣ ಮಾಡಿದ್ದು, 20ಕ್ಕೂ ಹೆಚ್ಚು ಕುಟುಂಬಗಳ ಜೊತೆ ಸಮಾಜಮುಖಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಆಶಾಢ ವಾರಿ ಸಂಪ್ರದಾಯದ ಸಂತರು ಈ ವಾಡಿಯಲ್ಲಿದ್ದು ಸುಗತೆ ಕುಟುಂಬ ಪತ್ರಿಕೋದ್ಯಮ ಆರಂಭಿಸುವುದರೊಂದಿಗೆ ತಮ್ಮ ಕೈಲಾದ ಕೊಡುಗೆ ನೀಡಿದೆ. ನಿಜಕ್ಕೂ ಈ ಕುಟುಂಬ ಸಮಾಜದ ಯುವಕರಿಗೆ ಮಾದರಿಯಾಗಿದೆ.